ಗುರುಪುರ ಬಿಲ್ಲವ ಸಮುದಾಯ ಭವನ ಲೋಕಾರ್ಪಣೆ : ಮೇ 4ರಂದು ಉದ್ಘಾಟನೆ : 1.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

New Project (8)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಬಿಲ್ಲವ ಸಮಾಜ ಸೇವಾ ಸಂಘ ಗುರುಪುರದ ಭವ್ಯ ಕನಸಾದ ‘ಸಮುದಾಯ ಭವನ’ ನಿರ್ಮಾಣಗೊಂಡಿದ್ದು, ಮೇ 4ರಂದು ಸಮಾಜದ ಸ್ಮರಣೆಯಲ್ಲಿ ಉಳಿಯುವ ಸಮಾರಂಭದೊಂದಿಗೆ ಸಮುದಾಯ ಭವನ ಲೋಕಾರ್ಪಣೆಗೊಳ್ಳಲಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಪರಮೋಚ್ಛ ತತ್ವಾದರ್ಶದಂತೆ 65 ಸಂವತ್ಸರಗಳ ಹಿಂದೆ ಗುರುಪುರದಲ್ಲಿ ಸ್ಥಾಪನೆಯಾದ ಬಿಲ್ಲವ ಸಂಘ ಹಲವು ಸಮಾಜೋದ್ಧಾರ ಕಾರ್ಯ ನಡೆಸಿದೆ. ಸಮುದಾಯಕ್ಕೆ ನೆರವಾಗಬೇಕೆನ್ನುವ ಉದ್ದೇಶದಿಂದ ಸಂಘ ಕೈಹಾಕಿರುವ ಸಮುದಾಯ ಭವನ ಯೋಜನೆ ಇದೀಗ ಕೈಗೂಡಿದೆ.

ಸಂಘ ನಡೆದು ಬಂದ ದಾರಿ

ಬಿಲ್ಲವ ಮುಖಂಡರಾದ ಡಾ.ಉಮಾನಾಥ ಸುವರ್ಣ ಬಿಕರ್ಣಕಟ್ಟೆ ಮತ್ತು ದಿ.ಸುಬ್ಬಪ್ಪ ಕೋಟ್ಯಾನ್ ಆಶಯದಂತೆ ಗುರುಪುರ ಭಂಡಾರಮನೆ ದಿ.ಸಂಕಪ್ಪ ಪೂಜಾರಿ, ದಿ.ಬೆಜ್ಜಬೆಟ್ಟು ದಾಸು ಪೂಜಾರಿ, ದಿ.ಗುಡ್ಡುಹಿತ್ಲು ಬಾಬು ಕುಂದರ್, ಭಂಡಾರಮನೆ ತಿಮ್ಮ ಪೂಜಾರಿ ಮತ್ತಿತರ ಸಮಾನ ಮನಸ್ಕರು 1960ರಲ್ಲಿ ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಬಿಲ್ಲವ ಸಂಘ ಸ್ಥಾಪಿಸುವ ನಿರ್ಧಾರ ಕೈಗೊಂಡರು. ನಂತರ 1964ರಿಂದ 1974ರವರೆಗೆ ಸ್ತಬ್ಧಗೊಂಡಿದ್ದ ಸಂಘ, ದಿ.ಎಸ್.ನಾರಾಯಣ ಪೂಜಾರಿ ಕುಲವೂರು ಮತ್ತಿತರರ ಮುಂದಾಳತ್ವದಲ್ಲಿ ಮತ್ತೆ ಹೊಸ ಯೋಜನೆಗಳೊಂದಿಗೆ ಮುನ್ನೆಲೆಗೆ ಬಂದಿತ್ತು. 1979ರಲ್ಲಿ ಗುರುಪುರ ಅಹಲ್ಯಾವನದಲ್ಲಿ 47 ಸೆಂಟ್ಸ್ ಜಾಗ ಖರೀದಿಸಿದ ಸಂಘ, 1981ರಲ್ಲಿ ಗುರು ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ, 1983ರಲ್ಲಿ ಮಂದಿರ ಸ್ಥಾಪಿಸಿತು. 2010ರಲ್ಲಿ ಸಂಘ ಸುವರ್ಣ ಮಹೋತ್ಸವ ಆಚರಿಸಿತ್ತು.

ನೂತನ ಗುರು ಮಂದಿರಕ್ಕೆ ಸ್ಥಳಾಂತರ: ನಂತರ ಸಂಘದ ಕಾರ್ಯಚಟುವಟಿಕೆ ನೂತನ ಗುರು ಮಂದಿರಕ್ಕೆ ಸ್ಥಳಾಂತರಗೊಂಡಿದ್ದು, ಸಮಾಜದ ಬಡವರ ವಿವಾಹ, ಶಿಕ್ಷಣ, ಮನೆ ಹಾಗೂ ಇನ್ನಿತರ ಅಗತ್ಯ-ಕಷ್ಟಗಳಿಗೆ ನೆರವಾಗುತ್ತಿದೆ. ಸಂಘದಿಂದ ಸಮಾಜಕ್ಕೆ ಹೆಚ್ಚಿನ ನೆರವಾಗಬೇಕೆಂಬ ನಿಟ್ಟಿನಲ್ಲಿ ಅಂದಾಜು 1.75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಕೈ ಹಾಕಲಾಯಿತು. ಇದಕ್ಕೆ ಸರ್ಕಾರದಿಂದ 65 ಲಕ್ಷ ರೂ. ಅನುದಾನ ಸಿಕ್ಕಿದ್ದು, ದಾನಿಗಳು ಹಾಗೂ ಸಮಾಜದ ಸಹಕಾರದಲ್ಲಿ ನಿರ್ಮಿಸಲಾಗಿದೆ.

ಮಾಜಿ ಅಧ್ಯಕ್ಷ ದಿ.ಸುಧಾಕರ ಅಮೀನ್ ಕಾಜಿಲ ಅವರ ಶ್ರಮ, ಸ್ಥಾಪಕಾಧ್ಯಕ್ಷ ದಿ.ಸಂಕಪ್ಪ ಪೂಜಾರಿ ಭಂಡಾರಮನೆ, ಎಸ್.ನಾರಾಯಣ ಪೂಜಾರಿ ಕುಲವೂರು, ಮಹಾಬಲ ಪೂಜಾರಿ ದೇವಂದಬೆಟ್ಟು, ಗಂಗಾಧರ ಅಂಚನ್ ಬೆಜ್ಜಬೆಟ್ಟು, ಬಾಲಕೃಷ್ಣ ಕೋಟ್ಯಾನ್, ಸುಧಾಕರ ಅಮೀನ್ ಕಾಜಿಲ ಮತ್ತು ಮಹಾಬಲ ಅಮೀನ್ ಗುರುಪುರ ಅವರ ಮುಂದಾಳತ್ವದಲ್ಲಿ ಸಂಘ ಮಹತ್ವದ ಅಭಿವೃದ್ಧಿ ಕಂಡಿದೆ. ಹಿರಿಯರಾದ ದೇವದಾಸ್ ಅಂಚನ್ ಮತ್ತು ಬಳ್ಳಿ ಚಂದ್ರಶೇಖರ ಅವರ ಕಾರ್ಯದಕ್ಷತೆಯಿಂದ ಸಂಘದ ಲೆಕ್ಕಪತ್ರ ಪಾರದರ್ಶಕವಾಗಿದೆ. ಸಂಘದ ಕಾರ್ಯ ಚಟುವಟಿಕೆ ವಿಸ್ತರಣೆ ದೆಸೆಯಲ್ಲಿ ವಿನೋದಾ ಡಿ.ಅಂಚನ್ ಅಧ್ಯಕ್ಷತೆಯಲ್ಲಿ ಸಂಘದ ಅಂಗಸಂಸ್ಥೆಯಾಗಿ ಹುಟ್ಟಿಕೊಂಡಿರುವ ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಗುರುವರ್ಯರ ತತ್ವಾದರ್ಶ ಸಕಾರಗೊಳಿಸುತ್ತಿದೆ. ಸಂಘದ ಪದಾಧಿಕಾರಿಗಳು ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಎನ್.ಎಚ್.ಪೊನ್ನೆಲ ಅವರ ಮುಂದಾಳತ್ವದಲ್ಲಿ ಭವನ ನಿರ್ಮಾಣಗೊಂಡಿದೆ.

ಗುರುಪುರದಲ್ಲೂ ಬಿಲ್ಲವ ಸಮುದಾಯ ಭವನ ನಿರ್ಮಾಣವಾಗಬೇಕೆಂಬ ಕನಸು ಎಲ್ಲರ ಶ್ರಮದಿಂದ ನನಸಾಗುತ್ತಿದೆ. ಇದು ಬಿಲ್ಲರಿಗೆ ಹೆಮ್ಮೆಯ ವಿಷಯ. ಸಂಘ ಸಮಾಜ ಬಾಂಧವರಿಗೆ ನೆರವಾಗಬೇಕು. ಭವನದಿಂದ ಆಸುಪಾಸಿನ ಬಡವರ ಕಾರ್ಯಕ್ರಮಗಳಿಗೆ ಪ್ರಯೋಜನವಾಗಬೇಕು. ಸಮಾಜದ ಮಕ್ಕಳ ಶೈಕ್ಷಣಿಕ ಕಷ್ಟಗಳಿಗೆ ಸಂಘ ಸ್ಪಂದಿಸಬೇಕು. ದೇವದಾಸ ಅಂಚನ್ ಬೆಜ್ಜಿಬೆಟ್ಟು ಸಂಘದ ಮಾಜಿ ಉಪಾಧ್ಯಕ್ಷ ಸಮುದಾಯ ಭವನಕ್ಕೆ ಸಹಕರಿಸಿದ ಸರ್ಕಾರ, ದಾನಿಗಳು ಹಾಗೂ ಸಮಾಜವರಿಗೆ ಮೊದಲಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಭವನದಿಂದ ಬರುವ ಆದಾಯ ಸಮಾಜದ ಬಡಮಕ್ಕಳ ಶಿಕ್ಷಣ, ಮನೆ ನಿರ್ಮಾಣ, ಮದುವೆ ಇತ್ಯಾದಿ ಅಗತ್ಯಗಳಿಗೆ ವಿನಿಯೋಗಿಸಲು ಉದ್ದೇಸಿದ್ದೇವೆ. ಭವನಕ್ಕೆ ಅಗತ್ಯವಿರುವ ಮೂಲಸೌಲಭ್ಯ ಕೊರತೆ ನೀಗಿಸುವ ಪ್ರಯತ್ನ ಮುಂದುವರಿದಿದೆ. ಬಿಲ್ಲವರು ಮುಂದೆಯೂ ನಮ್ಮೊಂದಿಗಿದ್ದರೆ, ಸಂಘದಿಂದ ಇನ್ನೂ ಹೆಚ್ಚಿನ ಸೇವೆ ನಿರೀಕ್ಷಿಸಬಹುದು. ಮಹಾಬಲ ಅಮೀನ್ ಗುರುಪುರ ಸಂಘದ ಅಧ್ಯಕ್ಷ https://www.vijayavani.net/uru-mahakaleshwar-brahma-kalash-from-may-15th https://www.vijayavani.net/candle-march-by-sullia-youth-congress

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net